ಆಗಿನ ಸಮಯದಲ್ಲಿ ಮನೋರಂಜನೆ ಎಂದರೆ ಕೇವಲ ಆಟವಾಗಿತ್ತು (ಬಯಲಾಟ). ಬೇರೆ ಬೇರೆ ಮೇಳದ ಜನರು ಬಂದು ಕನ್ನಡ, ತುಳು ಭಾಷೆಯ ಯಕ್ಷಗಾನ ಆಡಿ ಹೋಗುತ್ತಿದ್ದರು. ಹೆಚ್ಚಿನದ್ದು ಹರೆಕೆಯ ಆಟವೇ ಆಗಿತ್ತು. ಯಾವುದೇ ಟಿಕೇಟಿನ ರಗಳೆಯಿಲ್ಲ ಯಾರು ಬೇಕಾದರೂ ಬೆಳಗ್ಗಿನವರೆಗೆ ಕುಳಿತು ನೋಡಬಹುದು. ಹೆಚ್ಚಿನ ಮೇಳಗಳೂ ನಮ್ಮ ಶಾಲಾ ವಟಾರದಲ್ಲೇ ಬೀಡುಬಿಡುತ್ತಿದ್ದವು ಯಾಕೆಂದರೆ ಅವರಿಗೆ ಸತ್ಯನಾರಾಯಣ ಮಂದಿರದ ಬಾವಿಯಿಂದ ಬೇಕಾದಷ್ಟು ನೀರಿನ ಸೌಕರ್ಯವೂ ಇತ್ತು. ಆಟದ ಬಯಲಿನಲ್ಲೆ ಟೆಂಟ್ ಹಾಕಿ ಅಲ್ಲೇ ಪ್ರದರ್ಶನವೂ ನಡೆಯುತಿತ್ತು.
ಇಂತಹ ಒಂದು ಆಟ ನಡೆದ ಮರುದಿನ ಬೆಳಗ್ಗೆ ರಾತ್ರೆಯಿಡೀ ನಿದ್ದೆಗೆಟ್ಟು ಪೂರ್ತಿಯಾಗಿ ಆಟ ನೋಡಿದ್ದ ವ್ಯಕ್ತಿಯೊಂದು ಬೆಳನ ಬಸ್ಸಿಗೆ ಹತ್ತಿ ಮುಂದಿನ ಸೀಟಿನಲ್ಲಿ ಬಾಯಿತುಂಬ ವೀಳ್ಯಹಾಕಿ ಆಸೀನವಾಗಿತ್ತು. ಬಸ್ಸು ಬೆದ್ರಂಪಳ್ಳ ತಲುಪುವ ಓಳಗೆ ನಿದ್ದೆಕಣ್ಣಲ್ಲಿದ್ದ ಆ ವ್ಯಕ್ತಿ ಎದುರು ಕನ್ನಡಿ ಇದ್ದುದನ್ನೂ ಮರೆತು ಪಿಚಕಾರಿಯಂತೆ ಅದಕ್ಕೆ ಉಗುಳಿ ಕನ್ನಡಿ ಪೂರ್ತಿ ರಂಗವಲ್ಲಿಯೂ ಹಾಕಿಯಾಗಿತ್ತು.